ಕೊಡೆಯ ನೆಪ ವಾಸ್ತವತೆಯ ಜಪ
Posted date: 22/September/2010

ನಂಜನಗೂಡಿನ ಹೆಜ್ಜಿಗೆಯಲ್ಲಿ ಕೊಡೆ ಅರಳಿಕೊಂಡಿತ್ತು. ಅದು ಅಂತಿಂಥದ್ದಲ್ಲ..!. ‘ಬಣ್ಣದ ಕೊಡೆ’. ಆದರೆ ಅಲ್ಲೆಲ್ಲೂ ಬಣ್ಣಗಳಿರಲಿಲ್ಲ. ಬದಲಿಗೆ ಬನದ ಸಿರಿಯಿತ್ತು. ಹೊಳೆ ಬದಿಯ ದಡದಲ್ಲೊಂದು ಪುಟ್ಟ ಗುಡಿಸಲು ತಲೆ ಎತ್ತಿತ್ತು. ಎದುರಿಗೆ ನಂಜುಡೇಶ್ವರನ ದೇವಾಲಯ. ಸುತ್ತಲೂ ಹಚ್ಚ ಹಸಿರಿನ ಆಲಯ. ಜೊತೆಗೆ ಹೆಜ್ಜಿಗೆ ಜನರ ಪ್ರೀತಿಯ ಸಹಾಯ.
ಹೌದು..ಅಪರೂಪಕ್ಕೆ ಅಲ್ಲಿ ಚಿತ್ರ ತಂಡ ಬೀಡು ಬಿಟ್ಟಿತ್ತು. ಅದು ಎಲ್ಲರಿಗೂ ತಲುಪಲಿ ಎಂಬ ಉದ್ದೇಶದಿಂದ ಮಾಧ್ಯಮದ ಮಿತ್ರರನ್ನು ಆಹ್ವಾನಿಸಲಾಗಿತ್ತು. ಪತ್ರಕರ್ತರ ತಂಡ ತಲುಪುವ ವೇಳೆಗೆ ಬಿಡುವು ಮಾಡಿಕೊಂಡಿದ್ದ ಚಿತ್ರ ತಂಡ ನೇರ ಮಾತಿಗಿಳಿಯಿತು.
ಮೊದಲಿಗೆ ಮಾತನಾಡಿದವರು ಕ್ಯಾಪ್ಟನ್. ಅಂದರೆ, ಚಿತ್ರದ ನಿರ್ದೇಶಕ ಕೃಷ್ಣ ಬೆಳ್ತಂಗಡಿ. ‘ಬಣ್ಣದ ಕೊಡೆಯನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಬಳಸುತ್ತಿದ್ದೇವೆ. ಕೊಡೆಯ ಮೂಲಕ ಮುಗ್ಧ ಮಕ್ಕಳ ಕನಸುಗಳನ್ನು ತೆರೆದಿಡುವ ಪ್ರಯತ್ನವಿದು. ಸಣ್ಣದ್ದೊಂದು ಕನಸನ್ನೂ ಈಡೆರಿಸಿಕೊಳ್ಳಲಾಗದ ಬಾಲೆ ಹೇಗೆ ಪರಿತಪಿಸುತ್ತಾಳೆ. ಆಕೆಯ ಮನಸ್ಸನ್ನು ಅರಿಯುವ ತಾಯಿ ಹೇಗೆಲ್ಲ ಸ್ಪಂದಿಸುತ್ತಾಳೆ. ಅದಕ್ಕೆಲ್ಲ ಕಾರಣಕರ್ತನಾದ ತಂದೆ ಹೇಗೆಲ್ಲ ವರ್ತಿಸುತ್ತಾನೆ ಎನ್ನುವುದನ್ನು ಹೇಳುತ್ತಲೇ ಜೀವನದ ವಾಸ್ತವವನ್ನು ತೆರೆದಿಡುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.
ನಿರ್ದೇಶಕರ ಬಲಕ್ಕೆ ಕುಳಿತ್ತಿದ್ದ ವ್ಯಕ್ತಿಯೊಬ್ಬರ ಪರಿಚಯ ಗೊತ್ತಾಗಲಿಲ್ಲ. ಕಂಠ ಪೂರ್ತಿ ಕುಡಿದು ಬಂದಂತ್ತಿದ್ದ ಅತನ ಕುರಿತು ‘ಇವರು ಯತಿರಾಜ್. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಗುವಿನ ತಂದೆಯಾಗಿ ಅಭಿನಯಿಸುತ್ತಿದ್ದಾರೆ’ ಎನ್ನುವವರೆಗೂ ಅವರ ಗುರುತು ಸಿಕ್ಕಿರಲಿಲ್ಲ. ಅಷ್ಟೊಂದು ಬದಲಾವಣೆ ಮಾಡಿಕೊಂಡಿದ್ದ ಯತಿರಾಜ್, ಪಾತ್ರದೊಳಗೆ ಮುಳುಗಿ ಹೋಗಿದ್ದರು.
‘ನಿರ್ದೇಶಕರು ಕುಡುಕ ತಂದೆಯ ಪಾತ್ರದ ಕುರಿತು ಹೇಳಿದ ದಿನದಿಂದ ಗಡ್ಡ ಕೆರೆಯಲಿಲ್ಲ. ಉಗುರನ್ನು ಕಟ್ ಮಾಡಲಿಲ್ಲ. ಅಪರೂಪಕ್ಕೆ ಸಿಕ್ಕ ಈ ಪಾತ್ರಕ್ಕೆ ಹೇಗಾದರೂ ಮಾಡಿ ಜೀವ ತುಂಬಲೆಬೇಕೆಂಬ ಆಸೆಯೊಂದಿಗೆ ಒಂದಿಷ್ಟು ಹೋಂವರ್ಕ ಮಾಡಿಕೊಂಡೆ. ಅದಕ್ಕೆ ತಕ್ಕಂತೆ ನಿರ್ದೇಶಕರಿಂದಲೂ ಸಹಕಾರ ದೊರೆಯಿತು. ಅಭಿನಯಿಸುವಾಗ ಕಡಿವಾಣ ಹಾಕದೆ ನನಗೆ ಸಂಪೂರ್ಣ ಫ್ರೀಡಂ ನೀಡಿದರು. ಹಾಗಾಗಿ ನನಗೂ ಪಾತ್ರವನ್ನು ನಿಭಾಯಿಸುವುದು ಕಷ್ಟವೆನಿಸಲಿಲ್ಲ’ ಎಂದು ಹೇಳಿಕೊಂಡರು ಯತಿರಾಜ್.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆಗೈದಿರುವ ಹೈಜಂಪ್ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರಿಲ್ಲಿ ಶ್ರೀಮಂತ ಮನೆಯ ಮಾಲೀಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.‘ ಕ್ರೀಡಾ ಜಗತ್ತಿನ್ನಲ್ಲಿ ನನಗೆ ಅತ್ಯುತ್ತಮ ಬೆಂಬಲ ಸಿಕ್ಕಿತ್ತು. ಅದು ಚಿತ್ರ ಜಗತ್ತಿನ್ನಲ್ಲೂ ಸಿಗುವ ವಿಶ್ವಾಸದೊಂದಿಗೆ ಬಣ್ಣದ ಜಗತ್ತಿಗೆ ಕಾಲಿರಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ’ ಎಂದು ವಿನಂತಿಸಿಕೊಂಡರು.
ಕನಸು ಕಾಣುವ ಬಾಲೆಯಾಗಿ ಬೇಬಿ ಸುಹಾಸಿನಿ, ನಟಿಯರಾದ ಶರಣ್ಯ, ಮೋಹಿನಿ, ತಾರ, ಛಾಯಾಗ್ರಾಹಕ ವಿಷ್ಣು ಹಾಗೂ ನಿರ್ಮಾಪಕ ಹರೀಶ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed